ಕ್ರೇಪ್ 	
ಸಾಧಾರಣವಾದ ದಾರವನ್ನು ಉಪಯೋಗಿಸಿ ವಿಶೇಷ ನೇಯ್ಗೆ ಕ್ರಮದಿಂದ ತಯಾರಿಸಿರುವ ಮತ್ತು ಮೇಲ್ಮೈ ಕ್ರಮರಹಿತ ಹಾಗೂ ವಿಚ್ಛಿನ್ನವಾಗಿರುವ ಬಟ್ಟೆ. ಬಹುತೇಕ ಕ್ರೇಪ್ ವಸ್ತ್ರಗಳಲ್ಲಿ ಹಾಸುಹೊಕ್ಕುಗಳು ಹತ್ತಿ-ಉಣ್ಣೆ, ಹತ್ತಿ-ಕೃತಕ ರೇಷ್ಮೆ ಇತ್ಯಾದಿ ವಿಷಮ ಜಾತಿ ಎಳೆಗಳಿಂದ ಕೂಡಿರುತ್ತದೆ. ವಿಶೇಷವಾಗಿ ಕ್ರೇಪ್ ಬಟ್ಟೆಗಳಲ್ಲಿ ನೇಯ್ಗೆ ಸಾದಾ. ಕ್ರೇಪ್ ಸ್ವರೂಪ ಹಾಸನ್ನಾಗಲಿ ಹೊಕ್ಕನ್ನಾಗಲಿ ಅಥವಾ ಎರಡನ್ನೂ ವಿಪರೀತ ಹುರಿ ಮಾಡಿರುವುದರಿಂದ ಏರ್ಪಡುತ್ತದೆ. ಈ ರೀತಿ ನೇಯ್ದ ಬಟ್ಟೆಯನ್ನು ಆಕ್ಲೇದನ ಪೂರ್ಣಕ್ರಿಯೆಗೆ (ವೆಟ್ ಫಿನಿಷಿಂಗ್) ಒಳಪಡಿಸಿದರೆ ಹೊಕ್ಕು ದಾರ ಸಾಕಷ್ಟು ಸಂಕುಚಿತವಾಗುತ್ತದೆ. ನಿಯಮದಂತೆ ದಾರಗಳನ್ನು ಬಲಹುರಿ-ಎಡಹುರಿಗಳ ದಾರಗಳು ಸಮಾನ ಪ್ರಮಾಣದಲ್ಲಿರುವಂತೆ ಏರ್ಪಡಿಸುತ್ತಾರೆ. ಇದರಿಂದಾಗಿ ಬಟ್ಟೆ ಸಂಕುಚಿಸಿದಾಗ ಎಳೆಗಳು ಪರಸ್ಪರ ವಿರುದ್ಧ ದೆಸೆಗಳಲ್ಲಿ ಸಂಕುಚಿಸುತ್ತವೆ. ಇದರಿಂದಲೇ ಕ್ರಮರಹಿತ ಮೇಲ್ಮೈ ರೂಪ ಏರ್ಪಡುತ್ತದೆ. ಕ್ರೇಪ್ ಬಟ್ಟೆಗಳು ಹಗುರ ಮತ್ತು ಮೃದು.												(ವಿ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ